	ಕೃಷಿ ಉತ್ಪಾದನ ಯೋಜನೆಗಳು, ಪಂಚಾಯತಿ 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 	ಭಾರತದ ಗ್ರಾಮ ಪ್ರದೇಶದಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು, ಪಂಚಾಯತಿ, ಗ್ರಾಮಸೇವಕ, ಕೃಷಿ ಮತ್ತು ಸಹಕಾರ ಸಂಘಗಳ ನೆರವಿನಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯವಾಗಲು ರೂಪಿಸಿದ ಯೋಜನೆ. ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ಕುರಿತು ಅಭಿವೃದ್ಧಿ, ಕೃಷಿ ಸಹಕಾರ, ಪಶುಪಾಲನೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು 1962ರಲ್ಲಿ ನಡೆಸಿದ ಸಮಾಲೋಚನೆಯ ಫಲವಾಗಿ ಈ ಯೋಜನೆ ಜಾರಿಗೆ ಬಂತು. ಇದರ ಒಂದು ಕೈಪಿಡಿಯನ್ನು ಕೂಡ ತಯಾರಿಸಲಾಯಿತು. ಈ ಯೋಜನೆಗೆ ಗ್ರಾಮ ಪಂಚಾಯತಿಯನ್ನು ಘಟಕವಾಗಿ ಪರಿಗಣಿಸಿರುವುದರಿಂದ ಇದನ್ನು ಪಂಚಾಯತಿ ಕೃಷಿ ಉತ್ಪಾದನಾ ಯೋಜನೆಯೆಂದು ಕರೆಯುತ್ತಾರೆ. ಪಂಚಾಯತಿಯ ಗ್ರಾಮಸೇವಕ ಮತ್ತು ಸಹಕಾರ ಸಂಘದ ನೆರವಿನಿಂದ ತಯಾರಿಸಿದ ಈ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತದೆ. ಒಂದು ಮುಖ್ಯ ಆಹಾರ ಬೆಳೆಯನ್ನೂ ಒಂದು ಮುಖ್ಯ ಹಣದ ಬೆಳೆಯನ್ನೂ ಈ ಯೋಜನೆ ಒಳಗೊಂಡಿರುತ್ತದೆ. ಅವಶ್ಯವಿದ್ದಲ್ಲಿ ಎರಡೆರಡು ಬೆಳೆಗಳನ್ನೂ ಒಳಗೊಂಡಿರುತ್ತದೆ. ಹೀಗೆ ಆರಿಸಿದ ಬೆಳೆಗಳಿಗೆ ಅನುಸರಿಸಬೇಕಾದ ಸುಧಾರಿಸಿದ ಪದ್ಧತಿಗಳನ್ನು ಅನ್ವಯಿಸಲಾಗುತ್ತದೆ. ರೈತರು ವೈಯಕ್ತಿಕವಾಗಿ ಮತ್ತು ಗುಂಪುಗೂಡಿ ಸಾಧಿಸಲು ಒಪ್ಪಿರುವ ಗುರಿಯನ್ನು ಅನುಸರಿಸಿ ಉತ್ಪಾದನ ಯೋಜನೆಯನ್ನು ತಯಾರಿಸಲಾಗುವುದು. ಹೀಗೆ ಸಿದ್ಧಪಡಿಸಿದ ಯೋಜನೆಯಲ್ಲಿ ಸ್ಥಳೀಯ ಸಂಪನ್ಮೂಲ ಮತ್ತು ಜನಬಲವನ್ನು ಬಳಸಿಕೊಳ್ಳುವುದಕ್ಕೆ ಪ್ರಾಧಾನ್ಯ ನೀಡಲಾಗುತ್ತದೆ. ಉತ್ಪಾದನ ಯೋಜನೆ ಒಂದು ಕನಿಷ್ಠ ಯೋಜನೆ. ಪಂಚಾಯತಿ ಇನ್ನೂ ದೊಡ್ಡ ಯೋಜನೆಗಳಿಗೆ ಕೈಹಾಕಬಹುದು. ಗ್ರಾಮ ಸಂಸ್ಥೆಗಳು ಸ್ವಪ್ರಯತ್ನದಿಂದ ಹೆಚ್ಚು ಇಳುವರಿಯನ್ನು ಪಡೆಯುವುದೇ ಈ ಯೋಜನೆಯ ಪ್ರಥಮ ಉದ್ದೇಶ.

	ಯೋಜನೆಯ ನಿರ್ದಿಷ್ಟ ಗುರಿ : 1. ಗ್ರಾಮದಲ್ಲಿ ಕೆಲಸಮಾಡುವ ಎಲ್ಲ ಸಂಘ ಸಂಸ್ಥೆಗಳ ಮತ್ತು ಅಭಿವೃದ್ಧಿ ಇಲಾಖೆಗಳ ಒಟ್ಟು ಪ್ರಯತ್ನದಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಂಘಟಿತ, ಶೀಘ್ರ ಮತ್ತು ಸುಲಭ ವಿಧಾನಗಳನ್ನು ಏರ್ಪಡಿಸುವುದು : 2. ಉತ್ಪತ್ತಿಯನ್ನು ಹೆಚ್ಚಿಸಲು ಗ್ರಾಮದಲ್ಲಿ ಸಾಧ್ಯವಾಗುವ ಪದ್ಧತಿಗಳನ್ನು (ಗೊಬ್ಬರದ ಉತ್ತಮ ಉಪಯೋಗ, ಸುಧಾರಿತ ಬಿತ್ತನೆಯ ಬಳಕೆ, ಸಸ್ಯ ಸಂರಕ್ಷಣ ಕ್ರಮಗಳ ಅನುಸರಣೆ, ನೀರಾವರಿ ಸೌಲಭ್ಯಗಳ ಪರಿಣಾಮಕಾರಿ ಉಪಯೋಗ ಮತ್ತು ಒಣಬೇಸಾಯ ಪದ್ಧತಿಗಳು) ಕೈಗೊಳ್ಳುವುದು ; 3. ಕಾಲ ಕ್ರಮೇಣ ಎಲ್ಲ ರೈತರನ್ನೂ ಈ ಯೋಜನೆಗೆ ಒಳಪಡಿಸುವುದು ; 4. ನಿಧಾನವಾಗಿ ಎಲ್ಲ ಮುಖಗಳಿಗೂ ಈ ಯೋಜನೆಯನ್ನು ಅನ್ವಯಿಸುವುದು ಮತ್ತು ಆದಷ್ಟು ಹೆಚ್ಚು ಸುಧಾರಿತ ಪದ್ಧತಿಗಳನ್ನು ಆಚರಣೆಗೆ ತರುವುದು ; 5. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಜನರಲ್ಲಿ ತಿಳಿವಳಿಕೆ ಉಂಟುಮಾಡುವುದು : 6. ಕೃತಕ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರದ ಬಳಕೆಯನ್ನು ಹೆಚ್ಚು ಮಾಡುವುದು ಮತ್ತು 7. ಮಿಶ್ರ ಬೇಸಾಯ ಪದ್ಧತಿಗಳಿಗೆ ಉತ್ತೇಜನ ಕೊಡುವುದು.

	ದೊಡ್ಡ ಮತ್ತು ಸಣ್ಣರೈತರು, ಪ್ರಗತಿಪರರು ಮತ್ತು ಸಂಪ್ರದಾಯಶರಣರು, ಅಕ್ಷರಸ್ಥರು ಮತ್ತು ಅನಕ್ಷರಸ್ಥರು-ಹೀಗೆ ಎಲ್ಲರಿಗಾಗಿ ಈ ಯೋಜನೆಯಿರುವುದರಿಂದ ಇದು ಸರಳವಾಗಿಯೂ ಇರಬೇಕು. ಎಲ್ಲ ಉತ್ಪಾದನೆಯೂ ಹೆಚ್ಚಿನ ಶ್ರಮದಿಂದಲೇ ಸಾಧ್ಯವಾಗುವುದರಿಂದ ಯಾವ ಪ್ರಯತ್ನದಿಂದ ಅತ್ಯಂತ ಹೆಚ್ಚಿನ ಪ್ರತಿಫಲ ಸಿಗುವುದೋ ಅಂಥ ಕ್ರಮಗಳು ಮಾತ್ರ ಯೋಜನೆಯಲ್ಲಿ ಸೇರಿರುತ್ತವೆ. ಇದಲ್ಲದೆ ಆಯ್ದುಕೊಳ್ಳಲಾದ ಕ್ರಮಗಳು ಸ್ಥಳೀಯವಾಗಿ ದೊರಕುವ ಮತ್ತು ಸುಲಭವಾಗಿ ರೂಢಿಸಲು ಸಾಧ್ಯವಾಗುವ ಸಂಪನ್ಮೂಲಗಳನ್ನೇ ಆಧರಿಸಿರುತ್ತವೆ. ದೊರಕುವ ಗೊಬ್ಬರ ಸಂಪತ್ತಿನ ಉತ್ತಮ ಉಪಯೋಗ, ಸುಧಾರಿತ ಬಿತ್ತನೆಯ ವ್ಯಾಪಕವಾದ ಬಳಕೆ, ಸಸ್ಯ ಸಂರಕ್ಷಣ ಕ್ರಮಗಳ ವ್ಯಾಪಕ ಅನುಸರಣೆ, ಒದಗಿಬರುವ ನೀರಾವರಿ ಸೌಲಭ್ಯಗಳ ಪರಿಣಾಮಕಾರಿ ಉಪಯೋಗ ಮತ್ತು ಉತ್ತಮ ಒಣಬೇಸಾಯ-ಇವು ಈ ಯೋಜನೆಯಲ್ಲಿ ಸೂಚಿತವಾಗಿರುವ ಸುಧಾರಿತ ಪದ್ಧತಿಗಳು.

	ಯೋಜನೆಯ ಗುರಿ ಸಾಧಿಸುವ ಬಗೆ : ಈ ಯೋಜನೆ ಒಂದು ವಾರ್ಷಿಕ ಕಾರ್ಯಕ್ರಮ. ಕೃಷಿಕಾರ್ಯದ ಕಾಲ ವಾಸ್ತವವಾಗಿ ಇದಕ್ಕೂ ಕಡಿಮೆ ಇದ್ದರೂ ಇದರ ಪೂರ್ವಭಾವಿ ಮತ್ತು ಅನಂತರದ ಕೆಲಸಗಳಿಗಾಗಿ ಒಂದು ವರ್ಷದ ಅವಧಿಯನ್ನು ಗೊತ್ತುಪಡಿಸಲಾಗಿದೆ. ಉತ್ಪಾದನ ಯೋಜನೆಯಲ್ಲಿ ಕೈಗೊಳ್ಳಬೇಕಾದ ಎಲ್ಲ ಹಂತಗಳ ಕೆಲಸಗಳನ್ನು ಕ್ರಮಬದ್ಧವಾಗಿ ನಮೂದಿಸಿ ಅವುಗಳ ಪ್ರಾಮುಖ್ಯಕ್ಕೆ ಅನುಗುಣವಾಗಿ ಒಂದು ವೇಳಾಪಟ್ಟಿಯನ್ನು ತಯಾರಿಸಿರುತ್ತದೆ. ಯೋಜನೆಯ ಹಂತಗಳು ಈ ರೀತಿ ಇವೆ : 1. ಯೋಜನೆಯಲ್ಲಿ ಮಾಡಲಾಗಿರುವ ಸೂಚನೆಗಳಿಗೆ ಪಂಚಾಯತಿಯ ಒಪ್ಪಿಗೆ. 2. ವ್ಯವಸಾಯ ಉಪಸಮಿತಿಯ ರಚನೆ, 3. ಪ್ರಮುಖ ಬೆಳೆಗಳ ಜಮೀನಿನ ವಿಸ್ತಿರ್ಣ, ಇಳುವರಿ ಮುಂತಾದ ಅಂಕಿ-ಅಂಶಗಳ ಸಂಗ್ರಹಣೆ, 4. ಉತ್ಪಾದನಾ ಯೋಜನೆಯಲ್ಲಿ ಸೇರಿಸಬೇಕಾದ ಬೆಳೆಗಳ ಬಗ್ಗೆ ನಿರ್ಧಾರ, 5. ಬೆಳೆಗಳಿಗೆ ಅನ್ವಯಿಸುವ ಧಾರಣೆಗಳ ಬಗ್ಗೆ ರೈತರೊಡನೆ ಚರ್ಚೆ. 6. ಸುಧಾರಣೆಗಳ ಅಂಗೀಕಾರ. 7. ಹೆಚ್ಚು ಇಳುವರಿಯ ಬಗ್ಗೆ ಜಿಲ್ಲಾ ವ್ಯವಸಾಯಾಧಿಕಾರಿ ಕೊಡುವ ಶಿಷ್ಟತೆಯ ಅಂಗೀಕಾರ. 8. ಗ್ರಾಮಸಭೆಯಲ್ಲಿ ಕರಡು ಯೋಜನೆಯ ಚರ್ಚೆ ಮತ್ತು ಭಾಗವಹಿಸಲು ಕೋರುವ ರೈತರ ಪಟ್ಟಿಯ ರಚನೆ. 9. ವ್ಯವಸಾಯ ಉಪಸಮಿತಿ ಮತ್ತು ಸಹಕಾರ ಸಂಘದ ಜಂಟಿ ಸಭೆಯಲ್ಲಿ ಕರಡು ಯೋಜನೆಯ ಅಂಗೀಕಾರ, ಒದಗಿಬರುವ ಸಾಲ ಮತ್ತು ಸಾಮಗ್ರಿಗಳ ಅಂದಾಜು, ಸರಬರಾಯಿಯ ವೇಳಾಪಟ್ಟಿ ತಯಾರಿಕೆ ಮತ್ತು ಕಾರ್ಯಕ್ರಮದ ರೂಪ ರಚನೆ. 10. ಉತ್ಪಾದನಾ ಯೋಜನೆಯ ಬಗ್ಗೆ ಪಂಚಾಯತಿಯ ತೀರ್ಮಾನ, 11. ಯೋಜನೆಯ ಮೂರುಪ್ರತಿಗಳ ತಯಾರಿಕೆ. 12. ರೈತರೊಡನೆ ವಿಚಾರ ವಿನಿಮಯ ಮತ್ತು ಪ್ರತಿಯೊಬ್ಬ ರೈತನ ಭೂಮಿ, ಬೆಳೆ, ಆತ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳು ಮತ್ತು ಸಾಧಿಸಿದ ಅಭಿವೃದ್ಧಿ- ಇವನ್ನು ಬರೆದಿಡಲು ಪುಸ್ತಕ ಇಡುವುದು. 13. ಬ್ಲಾಕ್ ಯೋಜನೆಯ ರಚನೆ. 14. ತಿಂಗಳಿಗೊಮ್ಮೆ ಪಂಚಾಯತಿಯಿಂದ ಪ್ರಗತಿಯ ಪರಿಶೀಲನೆ ಮತ್ತು 15. ಯೋಜನೆಯನ್ನು ಕಾರ್ಯಗತ ಮಾಡಿದ ರೀತಿ ಮತ್ತು ಮುಂದಿನ ವರ್ಷದ ಕರಡು ಯೋಜನೆ ಇವುಗಳ ಬಗ್ಗೆ ಗ್ರಾಮಸಭೆಯಲ್ಲಿ ಪರಿಶೀಲನೆ.

	ಉತ್ಪಾದನ ಯೋಜನೆ ಯಶಸ್ವಿಯಾಗಲು ಪ್ರತಿ ಸಂಸ್ಥೆಯೂ ಪ್ರತಿ ವ್ಯಕ್ತಿಯೂ ತನ್ನ ಪಾಲಿನ ಹೊಣೆಯನ್ನು ನಿರ್ವಹಿಸುವುದು ಅವಶ್ಯ. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಮುಖ್ಯವಾಗಿ ಪಂಚಾಯತಿ, ಸಹಕಾರ ಸಂಘ, ಗ್ರಾಮಸೇವಕ, ತಾಲ್ಲೂಕು ಅಭಿವೃದ್ಧಿ ಮಂಡಲಿ, ಬ್ಲಾಕ್ ಸಿಬ್ಬಂದಿ, ಜಿಲ್ಲಾ ವ್ಯವಸಾಯಾಧಿಕಾರಿ, ಜಿಲ್ಲಾ ಸಹಕಾರಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೇಲೆ ಇದೆ. 

	ಹಲವಾರು ವರ್ಷಗಳ ಕಾಲ ಈ ಯೋಜನೆ ಯಶಸ್ವಿಯಾಗಿ ನಡೆದು, ಕಾಲಕ್ರಮದಲ್ಲಿ ಇದರ ಪ್ರಾಮುಖ್ಯ ಕಡಿಮೆಯಾಗುತ್ತ ಬಂದಿದೆ.  											(ಕೆ.ಆರ್.ಜಿ.ಎ.)